Tuesday, May 20, 2008

ಕಡತ ಸಾಗಣೆ ಒಡಂಬಡಿಕೆ - ೨

ಅಂಕೆಯ ಕಾಲುವೆ (data channel) ಏನೋ ೨೧ನೇ ರೇವಿನಲ್ಲಿ (port) ಏರ್ಪಡುತ್ತದೆ. ಆದರೆ ಮಾಹಿತಿ ಸಾಗಣೆ (data transfer) ಆಗುವುದು ಯಾವ ರೇವಲ್ಲಿ? ೨೦ನೇಯದು?
ಹವ್ದು. ೨೦ನೇ ರೇವು ಸರಿಯೇ. ಆದರೆ ಯಾವಾಗಲೂ ಅಲ್ಲ.

ಹಾಗಾದರೆ ೨೦ನೇ ರೇವಲ್ಲಿ ಮಾಹಿತಿ ಸಾಗಣೆ ಆಗೋದು ಯಾವಾಗ? ಹೇಗೆ?
ಕಸಾಒ (ಕಡತ ಸಾಗಣೆ ಒಡಂಬಡಿಕೆ - FTP) ಚುರುಕಾದಾಗ (active). ತೂಕಡಿಸುವಾಗ ಬೇರೆ ರೇವಲ್ಲಿ ಆಗುತ್ತದೆ.

"ಆಆಆ? ಏನ್ ಸಿವ ಇದು ಚುರುಕು; ತೂಕಡಿಸೋದು" ಅಂದ್ಕೊಂಡ್ರಾ? ಹೇಳ್ತೀನಿ. 'ಕಸಾಒ'ದಲ್ಲಿ ಎರಡು ಬಗೆ. ಚುರುಕು ಕಸಾಒ (active FTP) ಮತ್ತು ತೂಗು ಕಸಾಒ (passive FTP). ತೂಗು ಅನ್ನೋ ಪದ ಯಾಕೆ ಅಂದ್ರೆ ಊಳಿಗಿಯು (server) ತೂಕಡಿಸುತ್ತ, ಕೊಳ್ವನೇ (client) ಸಿಲುಕನ್ನು (connection) ತೊಡಗಿಸಲೆಂದು ಕಾಯುತ್ತ ಕೂರುತ್ತದೆ. ಚುರುಕು-ತೂಗು, ಈ ಪದಗಳು ಇಷ್ಟ ಆಗ್ತಿಲ್ವಾ? ಏನ್ ಮಾಡ್ಲಿ ನನಗೆ ಹೊಳೆದಿದ್ದೇ ಇವು. ಬೇರೆ ಸೂಕ್ತವಾದ ಪದಗಳು ಸಿಕ್ಕರೆ ಕಾಮೆಂಟ್ ಹಾಕಿ ತಿಳಿಸಿದರೆ ಉಪಕಾರ ಆಗುತ್ತೆ. ಸರಿ, ಅಲ್ಲಿಯವರೆಗೂ ಇವೇ ಪದಗಳನ್ನು ಬಳಸುತ್ತೇನೆ.

ಚುರುಕು ಬಗೆ ( active mode)
--------------------------

ಮೊದಲೇ ಹೇಳಿದಂತೆ, ಈ ಬಗೆಯಲ್ಲಿ, ಊಳಿಗಿಯು ಚುರುಕಾಗಿ ಸಿಲುಕು ಏರ್ಪಾಟಲ್ಲಿ ( connection establishment) ತೊಡಗಬೇಕು. ಇದಕ್ಕೆ ಮೊದಲು ಕೊಳ್ವನು "PORT N" ಎಂಬ ಅಪ್ಪಣೆಯನ್ನು ಕೊಟ್ಟು 'ನಾನು Nನೇ ರೇವಿನಲ್ಲಿ ನಿನಗಾಗಿ ಕಾಯುತ್ತಿರುತ್ತೇನೆ" ಎಂದು ಊಳಿಗಿಗೆ ತಿಳಿಸುತ್ತದೆ. N ಒಂದು ಮೀಸಲಲ್ಲದ ರೇವಾಗಿರುತ್ತದೆ (non-reserved port). ಅಪ್ಪಣೆ ಕೊಟ್ಟ ಕೂಡಲೇ, ಕೊಳ್ವನು , ಆ N ರೇವಿನಲ್ಲಿ ಕಿವಿಗೊಟ್ಟು ಕೂರುತ್ತದೆ. ಊಳಿಗಿಯು ಆಗ ತನ್ನ ಕಡೆಯ 20ನೇ ರೇವಿನಿಂದ ಕೊಳ್ವನ ಕಡೆಯ Nನೇ ರೇವಿಗೆ ಸಿಲುಕಿಸಲು ಯತ್ನಿಸುತ್ತದೆ. ಕೊಳ್ವನು ಈ ಸಿಲುಕಿನ ಕೋರಿಕೆ (connection request)ಯನ್ನು ಸ್ವೀಕರಿಸಿದರೆ ಸಿಲುಕು ಅಣಿ! ಓದು-ಬರೆ ಕರೆಗಳ ( read-write calls) ಮೂಲಕ ಮಾಹಿತಿಯು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಬಹುದು.
ಮಾಹಿತಿ ಸಾಗಣೆ (data transfer) ಆದ ಕೂಡಲೇ ಸಿಲುಕನ್ನು ಮುಚ್ಚಲಾಗುತ್ತದೆ. ಇಲ್ಲೂ ಊಳಿಗಿಯು ಚುರುಕಾಗಿರ ಬೇಕು. ಹಾಗಾಗಿ ಸಿಲುಕು ಮುಚ್ಚೋ ಕೆಲ್ಸ ಕೂಡ ಅದೇ ಮಾಡಬೇಕು.

ತೂಗು ಬಗೆ (passive mode):
--------------------------

ಮಾಹಿತಿ ಸಾಗಿಸಬೇಕಾದಾಗ, ಈ ಬಗೆಯಲ್ಲಿ, ಕೊಳ್ವನು ಅಂಕೆ ಕಾಲುವೆಯ ಮೂಲಕ 'PASV' ಎಂಬ ಅಪ್ಪಣೆಯನ್ನು ಕಳುಹಿಸಿ ನೀನು ತೂಗು (passive) ಬಗೆಯಲ್ಲಿರು ಎನ್ನುತ್ತದೆ. ಊಳಿಗಿಯು ಆಗ M ಅನ್ನೋ ಊ (random) ರೇವನ್ನು ತೆರೆದು, "PORT M" ಎಂಬ ಅಪ್ಪಣೆಯನ್ನು ಕೊಳ್ವನಿಗೆ ಕಳುಹಿಸುತ್ತದೆ. ಈ M ರೇವು ಮೀಸಲಲ್ಲದ (non-reserved) ರೇವಾಗಿರುತ್ತದೆ. ಈ ಅಪ್ಪಣೆಯನ್ನು ಪಡೆದಾಗ, ಕೊಳ್ವನು ಸಿಲುಕನ್ನು ಊಳಿಗಿಯ M ರೇವಿನೊಂದಿಗೆ ಏರ್ಪಡಿಸುತ್ತದೆ. ಎಂದಿನಂತೆ ಈಗ ಮಾಹಿತಿ ಸಿಲುಕು ಅಣಿ. ಓದು-ಬರೆ ಕರೆಗಳು ನಡೆದು ಮಾಹಿತಿ ಸಾಗಣೆ ಮುಗಿದ ಮೇಲೆ ಕೊಳ್ವನು ಈ ಸಿಲುಕನ್ನು ಮುಚ್ಚತ್ತದೆ. ಅಷ್ಟೇ!

ಎಲ್ಲಾ ಓಕೆ. ಆದರೆ ಈ ಎರಡು ಬಗೆ ಯಾಕೆ? ಒಂದೇ ಇದ್ದಿದ್ದರೆ ಇನ್ನೂ ಸಲೀಸಾಗ್ತಿರಲಿಲ್ವಾ?

ದಿಟ. ಆದರೆ ಕಿಚ್ಚು ಗೋಡೆ ಗೊತ್ತುಣ್ಟಾ? ಅಂದರೆ ಇಂಗಲೀಷಿನಲ್ಲಿ firewall. ಇದರಿಂದ ಕೆಲವು ತೊಂದರೆಗಳುಣ್ಟಾಗ್ತವೆ. ಅದಕ್ಕೆ ಈ ಎರಡು ಬಗೆಗಳು.

ತೊಂದರೆ ಏನು, ಈ ಎರಡು ಬಗೆಗಳಿಂದ ಹೇಗೆ ಅದು ಬಗೆಹರಿಯುತ್ತೆ ಅಂತ ಮುಂದಿನ ಕಂತಲ್ಲಿ ತಿಳಿಸ್ತೀನಿ. ಕಾಯ್ತಿರಿ. ಆದರೆ ಅಲ್ಲಿಯವರೆಗೆ ತೂಗು ಬಗೆಯಲ್ಲಿ ಕೂರುವುದು ಬೇಡ. ಚುರುಕಾಗಿ ಓದಿ, ಹೇಗನ್ನಿಸ್ತು ಅಂತ ಹೇಳಿ, ತಪ್ಪಿದ್ದರೆ ತಿದ್ದಿ, ಅನುಮಾನಗಳಿದ್ದರೆ ಕೇಳಿ. ದಂಡಿಯಾಗಿ ಕಾಮೆಣ್ಟ್ ಮಾಡಿ.

No comments: